ಸಂಪುಟ 3, ಸಂಚಿಕೆ 1, ಮಾರ್ಚ್ 2024
Articles

ಬಸವಣ್ಣನವರ ವಚನಗಳೂ... ಮನೋವಿಜ್ಞಾನವೂ

ಮೈತ್ರಿ ಭಟ್
ಸಹಾಯಕ ಪ್ರಾಧ್ಯಾಪಕಿ, ಕನ್ನಡ ವಿಭಾಗ, ವಿವೇಕಾನಂದ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು(ಸ್ವಾಯತ್ತ), ಪುತ್ತೂರು – 574203

Published 2024-03-01

Keywords

  • ಆಧ್ಯಾತ್ಮ, ವಚನ, ಮನೋವಿಜ್ಞಾನ, ಮ್ಯಾಸ್ಲೋ, ಆತ್ಮ ಸಾಕ್ಷಾತ್ಕಾರ

How to Cite

ಭಟ್ ಮ. (2024). ಬಸವಣ್ಣನವರ ವಚನಗಳೂ. ಮನೋವಿಜ್ಞಾನವೂ. ಕ್ರಿಸ್ತು ಜಯಂತಿ ಕನ್ನಡ ಸಂಶೋಧನ ಪತ್ರಿಕೆ (KRISTU JAYANTI KANNADA SAMSHODHANA PATHRIKE), 3(1), 17–21. https://doi.org/10.59176/kjksp.v3i1.2333

Abstract

ಕನ್ನಡದ ಅನನ್ಯ ಸಾಹಿತ್ಯ ಪ್ರಕಾರವಾದ ವಚನವು ಅಂತರಂಗದ ಉತ್ಕಟ ಅವಸ್ಥೆಯಿಂದ ಹೊರಬಂದ ಶಬ್ದರೂಪವಾಗಿದ್ದು, ಅತ್ತ ಪದ್ಯವೂ ಅಲ್ಲದ ಇತ್ತ ಗದ್ಯವೂ ಅಲ್ಲದ ಈ ವಿಶಿಷ್ಟ ಲಯಬದ್ಧ ಗೀತೆಯು ಗಾತ್ರದಲ್ಲಿ ಕಿರಿದಾದರೂ ಜೀವ ವಿಕಾಸದ ಹಾದಿಯಲ್ಲಿ ಹಿರಿದಾದುದೇ ಆಗಿದೆ. ಇಂತಹ ವಚನಗಳು ಅಂತರಂಗದ ನಿವೇದನೆಗಳಾಗಿ, ಆತ್ಮಗತ ಸಂಭಾಷಣೆಗಳಾಗಿ ಹೊರಹೊಮ್ಮಿವೆ. ವಿವಿಧ ಕಾಯಕಗಳಲ್ಲಿ ತೊಡಗಿದ್ದ ನಾನಾ ಜಾತಿಮತಗಳ ಜನರು ತಮ್ಮ ಅಂತಃಪ್ರೇರಣೆಯ ತುಡಿತಕ್ಕೆ ಸ್ಪಂದಿಸಿ, ತಮ್ಮ ಮನದಾಳದ ಚಿಂತನೆಗಳನ್ನು ಜನಮಾನಸಕ್ಕೆ ತಲುಪಿಸಲು ಆಡುನುಡಿಯನ್ನು ಬಳಸಿಕೊಂಡರು. ಶುದ್ಧ ದೇಸೀ ಮನೋಭೂಮಿಕೆಯಲ್ಲಿ ಹುಟ್ಟಿದ ಇವು ಗದ್ಯದ ನಿರರ್ಗಳತೆಯಿಲ್ಲದಿದ್ದರೂ ಸರಳತೆಯಿಂದ, ಪದ್ಯದ ಕ್ರಮಬದ್ಧ ಛಂದೋಗತಿ ಇಲ್ಲದಿದ್ದರೂ ಅದರ ಲಯದಿಂದ ಕೂಡಿ ಸ್ವಚ್ಛಂದ ಲಯದಲ್ಲಿ ಮಿಂದೇಳುತ್ತವೆ.

ಬಿಡಿಯಾಗಿ ನೋಡಿದರೆ ಮುತ್ತಿನಂತೆಯೂ, ಇಡಿಯಾಗಿ ನೋಡಿದರೆ ಮುತ್ತಿನ ಹಾರದಂತೆಯೂ ಶೋಭಿಸುವ ಈ ವಚನ ಪರಂಪರೆಯಲ್ಲಿ ವಚನಗಳ ಮೂಲಕ ಆತ್ಮಕಲ್ಯಾಣದ ಜೊತೆಗೆ ಸಮಾಜಕಲ್ಯಾಣದ ಬಗೆಗೂ ಜೀವಪರ ಹೆಜ್ಜೆಯಿಟ್ಟವರಲ್ಲಿ ಬಸವಣ್ಣ ಎಲ್ಲರ ಮನದಲ್ಲಿ ಇಂದಿಗೂ ನೆಲೆಯಾಗಿದ್ದಾರೆ.

ಬುದ್ಧಿ-ಅನುಭವದಿಂದ ಒಡಗೂಡಿರುವ ಈ ರಚನೆಗಳು ಆತ್ಮದ ಅರಿವಿನ ಸಂಕೇತವಾಗಿ ಬೆಳಗಿರುವುದನ್ನು ಕಾಣಬಹುದು. ಇಂತಹ ವಚನಗಳಲ್ಲಿ ಮನಸ್ಸಿನ ಬಗೆಗಿನ ವಿಚಾರಗಳು ಮತ್ತೆ ಮತ್ತೆ ಧ್ವನಿಸುತ್ತವೆ. ಆದರೆ ಅಷ್ಟು ಮಾತ್ರವಲ್ಲ; ಈ ವಚನಗಳಲ್ಲಿ ಅಡಕವಾಗಿರುವ ಸಾಮಾಜಿಕ, ಧಾರ್ಮಿಕ ಸುಧಾರಣಾವಾದಿ ಪರಿಕಲ್ಪನೆಗಳೊಂದಿಗೆ ಮನೋವಿಜ್ಞಾನದ ನೆಲೆಯಲ್ಲಿಯೂ ವಚನಗಳನ್ನು ವಿಶ್ಲೇಷಿಸುವುದಕ್ಕೆ ಸಾಧ್ಯವಿದೆ. ಈ ಹಿನ್ನೆಲೆಯಲ್ಲಿ ಬಸವಣ್ಣನವರ ವಚನಗಳನ್ನು ಪರಿಶೀಲಿಸಲು ಸಾಧ್ಯವಿದೆ.

ನಮ್ಮ ಬದುಕಿನ ದೈನಂದಿನ ಚಲನವೆಲ್ಲ ಮನೋಕೇಂದ್ರಿತವಾದುದು. ನೋವು-ನಲಿವು, ಕೋಪ-ತಾಪ, ಒಳಿತು-ಕೆಡುಕುಗಳೆಲ್ಲ ಜನ್ಮತಾಳುವುದು ಈ ಮನೋಭೂಮಿಕೆಯಲ್ಲಿಯೇ. ಬದುಕನ್ನು ರೂಪಿಸುವ ಪ್ರಮುಖ ಸಾಧನವೆಂದರೆ ಅದು ನಮ್ಮ ಮನಸ್ಸೇ ಅಗಿದೆ. ಭೌತಿಕ ಆಗುಹೋಗುಗಳಿರಲಿ, ಆಧ್ಯಾತ್ಮಿಕ ತುಡಿತಗಳಿರಲಿ ಎಲ್ಲದರ ಮೂಲ ಸ್ಥಾನ ಮನಸ್ಸೇ ಆಗಿದೆ. ಭಕ್ತಿಮಾರ್ಗದ ಚಂಚಲತೆಗೆ, ಸಾಧನೆ ಮರೆಯಾಗುವುದಕ್ಕೆ ಕಾರಣ ಈ ಚಿತ್ತವೇ ಆಗಿದೆ.

ಈ ಮಾನವ ಮನಸ್ಸು ಎಂಬುದು ನೂರಾರು ಭಾವಸಂಕುಲಗಳ ಆಗರ. ಶರಣರ ಪ್ರಾರ್ಥನೆ, ದೈವ ಸಾಕ್ಷಾತ್ಕಾರದ ಹಂಬಲ, ಭಗವಂತನ ಅರಿವು, ಅರಿವಿನ ಬೆಳಗು, ಸಾಮಾಜಿಕ ಚಿಂತನೆ ಎಲ್ಲವೂ ಮೂರ್ತಗೊಳ್ಳುವುದು ಮನಸ್ಸಿನಲ್ಲಿಯೇ. ಒಟ್ಟಿನಲ್ಲಿ, ಮನಸ್ಸಿನ ವಿವೇಚನೆಯೇ ವಚನಗಳ ಸ್ವರೂಪವೆಂದರೂ ತಪ್ಪಾಗಲಾರದು.

ಇಂತಹ ತಮ್ಮ ಅನೇಕ ವಚನಗಳಲ್ಲಿ ಬಸವಣ್ಣನವರು ಮನದ ತೊಳಲಾಟವನ್ನು ಚಿತ್ರಿದ್ದಾರೆ. ಅಂದರೆ ಈ ಮನ ಎನ್ನುವುದು ಮೂಲಭೂತ ಅವಶ್ಯಕತೆಗಾಗಿ ಹೋರಾಡುತ್ತಾ ಅದರಲ್ಲೇ ಮುಳುಗಿರುವುದನ್ನು, ಅದನ್ನು ದಾಟಿ ಮೇಲೇರಬೇಕಾದುದನ್ನು ಸೂಚಿಸುತ್ತಾರೆ. ಅಂದರೆ ಮ್ಯಾಸ್ಲೋ ಹೇಳುವ ಮೂಲಭೂತ ಅವಶ್ಯಕತೆ ಎಂಬ ಹೆಚ್ಚು ಮನ ಬಯಸುವ ವಿಚಾರಗಳಿಗೆ ಇದು ಸಂಬಂಧಿಸಿದೆ. ಈ ಹಿನ್ನೆಲೆಯಲ್ಲಿ ಈ ಲೇಖನದಲ್ಲಿ ಬಸವಣ್ಣನವರ ವಚನಗಳನ್ನು ಮನೋವಿಜ್ಞಾನದ ಬೆಳಕಿನಲ್ಲಿ ಚರ್ಚಿಸಲಾಗಿದೆ.

Downloads

Download data is not yet available.

References

1. ವಚನ ದರ್ಶನ., ಶಿವಪ್ಪ, ಕೆ. ಸಿ., ೨೦೧೭, ಅಭಿನವ ಪ್ರಕಾಶನ, ಬೆಂಗಳೂರು.
2. ವಚನ ಸಾಹಿತ್ಯದಲ್ಲಿ ಮನೋವಿಜ್ಞಾನ., ಇ-ಸುದ್ದಿ., ಸವಿತಾ ಮಾಟೂರ., ಆಗಸ್ಟ್ ೬, ೨೦೨೧.